ವೇದವತಿ
	ಕುಶಧ್ವಜನ ಮಗಳು. ಮಹಾ ಸೌಂದರ್ಯವತಿ. ನಿತ್ಯವೂ ಕುಶಧ್ವಜ ಪಾರಾಯಣ ಮಾಡುತ್ತಿದ್ದ ವೇದವಾಕ್ಯಗಳ ಸಾರಾಂಶವೇ ಸ್ತ್ರೀ ರೂಪವಾದಂತೆ ವೇದವತಿ ತನ್ನ ನಡೆ-ನುಡಿ-ಗುಣಗಳಿಂದ ಅಸೀಮ ಸುಂದರಿ ಎನಿಸಿಕೊಂಡಿದ್ದಳು. ವೇದವತಿಯ ಸೌಂದರ್ಯಕ್ಕೆ ಮರುಳಾದ ಶಂಖನೆಂಬ ರಾಕ್ಷಸ ಕುಶಧ್ವಜನ ಬಳಿಗೆ ಬಂದು ವೇದವತಿಯನ್ನು ತನಗೆ ಮದುವೆ ಮಾಡಿಕೊಡಬೇಕೆಂದು ಕೇಳಿದ. ಆಗ ಕುಶಧ್ವಜ ತನ್ನ ಮಗಳನ್ನು ವಿಷ್ಣುವಿಗಲ್ಲದೆ ಬೇರೆ ಯಾರಿಗೂ ಕೊಡುವುದಿಲ್ಲ, ವಿಷ್ಣುವೇ ನನ್ನ ಮಗಳಿಗೆ ಅನುರೂಪನಾದ ವರ ಎಂದ. ಈ ಮಾತಿನಿಂದ ಸಿಟ್ಟಿಗೆದ್ದ ಶಂಖ, ಕುಶಧ್ವಜನನ್ನು ಕೊಂದು ಹಾಕಿದ. ಪತಿಯನ್ನು ಕಳೆದುಕೊಂಡ ಕುಶಧ್ವಜನ ಹೆಂಡತಿ ಸಹಗಮನ ಮಾಡಿದಳು. ಅನಾಥೆಯಾದ ವೇದವತಿ ನಾರಾಯಣನನ್ನೇ ಮದುವೆಯಾಗುವ ಉದ್ದೇಶದಿಂದ ತಪಸ್ಸು ಮಾಡತೊಡಗಿದಳು. ಏತನ್ಮಧ್ಯೆ, ದಿಗ್ವಿಜಯಕ್ಕೆ ಹೊರಟ ರಾವಣ ಮಾರ್ಗಮಧ್ಯದಲ್ಲಿ ವೇದವತಿಯನ್ನು ಕಂಡು, ಅವಳ ಪೂರ್ವೋತ್ತರಗಳನ್ನೆಲ್ಲ ಕೇಳಿ ತಿಳಿದು ಅವಳ ಸೌಂದರ್ಯಕ್ಕೆ ಮರುಳಾಗಿ ಅವಳನ್ನು ಬಲಾತ್ಕರಿಸಿದ. ಆಗ ವೇದವತಿ ಆತನಿಂದ ಬಿಡಿಸಿಕೊಂಡು ಕ್ರೋಧದಿಂದ ಈ ರೀತಿ ನನ್ನನ್ನು ಹಿಂಸಿಸಿದ ನಿನ್ನನ್ನು ಮುಂದಣ ಜನ್ಮದಲ್ಲಿ ಅಯೋನಿಜೆಯಾಗಿ ಹುಟ್ಟಿ ಕೊನೆಗಾಣಿಸುವೆ ಎಂದು ಶಪಥಮಾಡಿ ಅಗ್ನಿಪ್ರವೇಶ ಮಾಡಿದಳು. ಈ ವೃತ್ತಾಂತ ರಾಮಾಯಣದ ಉತ್ತರಕಾಂಡದಿಂದ ತಿಳಿದುಬರುತ್ತದೆ. ಹೀಗೆ ಅಗ್ನಿಪ್ರವೇಶ ಮಾಡಿದ ವೇದವತಿ, ಲಂಕೆಯ ಒಂದು ಸರೋವರದಲ್ಲಿ ಕಮಲದಿಂದ ಜನಿಸಿದಳು. ರಾವಣ ಇದನ್ನು ಕಂಡು ಆಶ್ಚರ್ಯಗೊಂಡು ಜೋಯಿಸರಲ್ಲಿ ವಿಚಾರಿಸಿದಾಗ, ಅವರು ಈ ರೀತಿ ನಡೆದಿರುವುದು ಮುಂದಿನ ಕಷ್ಟದ ದಿನಗಳ ಸೂಚನೆ ಎಂದರು. ಆಗ ರಾವಣ ಆ ಮಗುವನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ ಭದ್ರಪಡಿಸಿ ಸಮುದ್ರದಲ್ಲಿ ಎಸೆದ. ಆ ಪೆಟ್ಟಿಗೆ ತೇಲುತ್ತಾ ಬಂದು ಮಿಥಿಲಾ ನಗರದ ಬಳಿ ಜನಕರಾಜನ ಕೈಸೇರಿತು. ಜನಕರಾಜ ಆ ಮಗುವನ್ನು ತನ್ನ ಮಗಳೇ ಎಂದು ಭಾವಿಸಿ ಸಾಕಿದ. ಇವಳೇ ರಾವಣನ ವಧೆಗೆ ಹೇತುವಾದ ರಾಮಚಂದ್ರನ ಹೆಂಡತಿ ಸೀತಾದೇವಿ. ಈ ವೃತ್ತಾಂತ ರಾಮಾಯಣ ಹಾಗೂ ಭಾಗವತದಲ್ಲಿ ಉಕ್ತವಾಗಿದೆ.			
			(ಎ.ವಿ.ಕೆ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ